ಮಣಿಪುರಿ
ಮಣಿಪುರದ ಜನಪದ ಮತ್ತು ಶಾಸ್ತ್ರೀಯ ನೃತ್ಯಗಳನ್ನು ಈ ಹೆಸರಿನಿಂದ ಕರೆಯುವುದು ವಾಡಿಕೆ. ಈ ನೃತ್ಯಗಳು ಅತ್ಯಂತ ಪ್ರಾಚೀನವಾಗಿದ್ದು ಅಲ್ಲಿಯ ಜನರ ಸಂಸ್ಕøತಿ ಮತ್ತು ಕಲೋಪಾಸನೆಯ ಪ್ರತೀಕಗಳಾಗಿವೆ. ಲಾಯ್ ಹರೋಬ, ರಾಸಲೀಲಾ, ತಬಲ್, ಚೊಂಗ್‍ಬಿ, ಲೆಯ್ ಪೌಚೊಂಗ್ಬಾ, ಮಖೊಮ್‍ಲಮ್, ಪೆಯ್‍ಛಾಕ್, ತಂಡನ್ ಪೈಬೊಕ್ ಮುಂತಾದ ವಿಶಿಷ್ಟ ನೃತ್ಯಗಳ ತವರು ಮಣಿಪುರ. ಬಹಳಷ್ಟು ನೃತ್ಯಗಳು ಈಗಲೂ ಪ್ರಾಚೀನ ಜಾನಪದ ರೂಪದಲ್ಲಿದ್ದರೂ ಹಲವು ನೃತ್ಯಗಳು ಸಂಸ್ಕಾರ ಪಡೆದು ಆಧುನಿಕ ಶಾಸ್ತ್ರೀಯ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಿವೆ.

	ಲಾಯ್ ಹರೋಬ ಪುರಾತನ ಹಾಗೂ ಭಕ್ತಿ ಪ್ರಧಾನ ನೃತ್ಯ, ಶಿವ ಪಾರ್ವತಿಯರ ಲೀಲಾವಿನೋದವನ್ನು ಬಿಂಬಿಸುವ ಈ ನೃತ್ಯದಲ್ಲಿ ಗ್ರಾಮದೇವತೆಯ ಪ್ರಜಾರಿ (ಮೈಬಾಸ್) ಮತ್ತು ಪ್ರಜಾರಿಣಿ (ಮೈಬೀಸ್) ಪ್ರಮುಖ ಪ್ರಾತವಹಿಸಿ, ಮಣಿಪುರದ ಸ್ಥಳಮಹಾತ್ಮೆಯನ್ನೂ ಜಗತ್ತಿನ ಸೃಷ್ಟಿಯನ್ನೂ ಬಿಂಬಿಸುತ್ತಾರೆ. ನರ್ತಕರಲ್ಲಿ ದೈವಿಕಾಂಶ ಪ್ರವೇಶಿದಾಗ ನೃತ್ಯದ ನಡೆ ತಾರಕಕ್ಕೇರಿ ಮನಮೋಹಕವಾಗಿ ಅಭಿನಯಿಸಲ್ಪಡುತ್ತದೆ. ಶಿವ-ಪಾರ್ವತಿಯರ (ಖಂಬಾ-ತೊಯಿಬಿ) ಪ್ರೇಮಕಥೆ ನರ್ತನದ ವಸ್ತುವಾಗಿರುತ್ತದೆ. ರಾಧಾ-ಕೃಷ್ಣರ ಪ್ರಣಯ ಕಥೆ ವಸ್ತುವಾಗಿರುವ ನೃತ್ಯ ರಾಸಲೀಲಾ. ಈ ನೃತ್ಯ ಪ್ರಾಚೀನವಾದರೂ 1700ರಲ್ಲಿ ಜೀವಿಸಿದ್ದ ಭಾಗ್ಯಚಂದ್ರ ಎಂದು ಕರೆಯಲ್ಪಟ್ಟ ಮಹಾರಾಜ ಜಯಸಿಂಗನ ಕಾಲದಲ್ಲಿ ಊರ್ಜಿತಾವಸ್ಥೆ ತಲುಪಿತೆಂದು ತಿಳಿದುಬರುತ್ತದೆ. ಇದರಲ್ಲಿ ಹಲವಾರು ಪ್ರಭೇದಗಳಿವೆ. ಫಾಲ್ಗುಣಮಾಸದ ಹುಣ್ಣಿಮೆಯಂದು ನಡೆಯುವ ನೃತ್ಯವೇ ಬಸಂತ್‍ರಾಸ್ (ವಸಂತರಾಸ್). ರಾಧಾ-ಕೃಷ್ಣರ ನಡುವೆ ಏರ್ಪಡುವ ಒಪ್ಪಂದವೇ ಇದರ ಕಥಾವಸ್ತು. ಕೃಷ್ಣನ ನಯವಂಚನೆಯಿಂದ ಮನನೊಂದ ರಾಧೆ ಸುಲಭಕ್ಕೆ ಒಲಿಯದೆ `ನಿನ್ನ ಪಾದಗಳ ಮೇಲೆಬಿದ್ದು ಸಾಷ್ಟಾಂಗ ಪ್ರಣಾಮ ಮಾಡುತ್ತೇನೆ ಎಂದು ಕೃಷ್ಣ ಕ್ಷಮೆ ಕೇಳುವ ಮಟ್ಟಕ್ಕೆ ಒಂದಾಗ ಒಪ್ಪಂದಕ್ಕೆ ಬರುವ ನೃತ್ಯ ವಿಧಾನ ಮನಮೋಹಕವಾದುದು. `ಕುಂಜರಾಸ ದಸರಾಕಾಲದಲ್ಲಿ ನರ್ತಿಸುವ ಉಲ್ಲಾಸ ಪ್ರವೃತ್ತಿಯ ನೃತ್ಯ. ಇದು ರಾಧಾ-ಕೃಷ್ಣರ ಆದರ್ಶ ಪ್ರೇಮದ ಜೀವನಕ್ರಮವನ್ನು ಪ್ರಕಟಪಡಿಸುತ್ತದೆ. ವಿರಹದ ನೋವು ಇರದೆ. ಪರಸ್ಪರರ ಮಿಲನ ಸುಖವನ್ನು ವ್ಯಕ್ತಪಡಿಸುವುದೇ ಈನೃತ್ಯದ ತಿರುಳಾಗಿದೆ. ರಾಧಾ-ಕೃಷ್ಣರ ವಿರಹವನ್ನು ಚಿತ್ರಿಸುವುದೇ `ಮಹಾರಾಸ ನೃತ್ಯ. ಇದು ಡಿಸೆಂಬರ್ ತಿಂಗಳ ಹುಣ್ಣಿಮೆಯಲ್ಲಿ ನಡೆಯುತ್ತದೆ. ಇದರಲ್ಲಿ ನಿತ್ಯರಾಸ, ದಿವರಾಸ ಎಂಬ ಪ್ರಭೇದಗಳೂ ಇವೆ. ನಟ್ನರಾಸ ಎಂಬ ಇನ್ನೊಂದು ಪ್ರಭೇದದಲ್ಲಿ ಎಂಟು ಜನ ಗೋಪಿಕೆಯರ ಮತ್ತು ಎಂಟು ಜನ ಕೃಷ್ಣರ ಕೂಟನೃತ್ಯ ಕಾಣಬಹುದಾಗಿದೆ. ಹೀಗೆ ಈ ರಾಸಲೀಲಾ ನೃತ್ಯದಲ್ಲಿ ಕೃಷ್ಣ ಪ್ರವೇಶ ನೃತ್ಯ, ಪ್ರಾರ್ಥನಾ ನೃತ್ಯ ಎಂದು ಆರು ಹಂತಗಳನ್ನು ಕಾಣಬಹುದು. ಈ ನೃತ್ಯದ ಉಡುಗೆ ತೊಡುಗೆಗಳು ವಿವಿಧ ಬಣ್ಣಗಳಿಂದ ಕೂಡಿದ್ದು ಮನಮೋಹಕವಾಗಿರುತ್ತವೆ. ನೃತ್ಯದ ಎಲ್ಲ ಹಂತಗಳಲ್ಲೂ ಪಕ್ಕವಾದ್ಯಗಳಿದ್ದು, ನರ್ತಕರ ಬದಲಿಗೆ ಗಾಯಕ ಗಾಯಕಿಯರು ಹಾಡುತ್ತಾರೆ. ಈ ನೃತ್ಯ ಭಾವೋದ್ವೇಗಗಳಿಂದ ಕೂಡಿದ್ದರೂ ಇದರಲ್ಲಿ ಕಂಡುಬರುವ ಭವ್ಯತೆ ನೃತ್ಯವನ್ನು ಸೌಂದರ್ಯಪೂರ್ಣ, ರಮ್ಯ ಹಾಗೂ ಕಲಾತ್ಮಕವಾಗಿಸಿದೆ.

	ಮಣಿಪುರದ ಋತುಕಾಲದ ನೃತ್ಯಗಳ ಪೈಕಿ ಅತ್ಯಂತ ಹರ್ಷಪೂರಿತ ಕೂಟನೃತ್ಯವೆಂದರೆ ತಬಲ್ ಚೊಂಗ್ ಬಿ. ಇದರ ಅರ್ಥ ಬೆಳುದಿಂಗಳ ಬೆಳಕಿನಲ್ಲಿ ಕುಣಿಯುವುದು ಎಂದು. ಅಂತಸ್ತು, ವಯಸ್ಸು, ವರ್ಗ, ವರ್ಣ, ಮತಭೇದಗಳಿಲ್ಲದೇ ಎಲ್ಲ ಜನರೂ ಒಟ್ಟಿಗೆ ಸೇರಿ ಕಾಮದಹನದ ಹಬ್ಬದಲ್ಲಿ ಕೂಟನೃತ್ಯ ಮಾಡುವುದೇ ಈ ತಬಲ್ ಚೊಂಗ್ ಬಿ ನೃತ್ಯದ ವೈಶಿಷ್ಟ್ಯ. ಈ ನೃತ್ಯ ಯುವಕ ಯುವತಿಯರ ಸ್ವೇಚ್ಛಾನೃತ್ಯವೂ ಆಗಿದೆ. ಮಳೆಬೆಳೆ ಸಮೃದ್ಧವಾಗಿ ಒದಗಿಬರಲೆಂದು ನರ್ತಿಸುವ ನೃತ್ಯಲೆಯ್ ಪೌಚೊಂಗ್ಬಾ. ಆದರೆ, ಭಗವಂತ ತಾನು ಸೃಷ್ಟಿಸಿದ ಭೂಲೋಕಕ್ಕೆ ಇಳಿದುಬಂದು ಜಗನ್ಮಾತೆಯೊಂದಿಗೆ ಆನಂದದಿಂದ ನರ್ತಿಸುವುದು ಮಖೊವ್ ಲಮ್ ನೃತ್ಯ. ಕೊಯ್ಲಿನ ಕಾಲದಲ್ಲಿ ನಾಗಾ ಹೆಣ್ಣುಗಂಡುಗಳು ಕೊಯ್ಲಿನರಾಣಿಗೆ ಪ್ರಾರ್ಥನೆ ಸಲ್ಲಿಸಿ ಆನಂದೋತ್ಸಾಹಗಳಿಂದ ವಿವಿಧ ವಿನ್ಯಾಸಗಳಿಂದ ನರ್ತಿಸುವುದು ಫಯ್ ಛಾಕ್. ದೇವತೆಗಳ ಸಂಪ್ರೀತಿಗಾಗಿ ವಾರ್ಷಿಕ ಹಬ್ಬಗಳಂದು ನರ್ತಿಸುವುದು ಪೆಯ್ ಛಾಕ್ ದೇವತೆಗಳ ಸಂಪ್ರೀತಿಗಾಗಿ ವಾರ್ಷಿಕ ಹಬ್ಬಗಳಂದು ದಂಪತಿಗಳು ಪರಸ್ಪರ ಕೈಹಿಡಿದುಕೊಂಡು ಕುಣಿಯುವ ಕುಣಿತ ತಂಡನ್ ಫೈಬೊಕ್. ಪೂನ್ ಸಲಂ ಹಲ್ಲೋಹಿ, ಪುಂಸಂ ಕಡಿಂಲಂ ಮುಂತಾದ ವಿವಿಧ ಪ್ರಕಾರದ ಮನಮೋಹಕ ನೃತ್ಯಗಳು ಬಳಕೆಯಲ್ಲಿವೆಯಲ್ಲದೆ, ತತ್ತ್ವ ಮತ್ತು ವಿಧಾನಗಳಲ್ಲಿ ವೈವಿಧ್ಯಗಳಿಂದ ಕೂಡಿದ ಮಾವೋ(ಪ್ರಾರ್ಥನೆ), ಉರಿಡೋಹ್ (ಸಮರ ನೈಪುಣ್ಯತೆ), ಉಟಾನ್‍ಗು (ಭೂದೇವಿಕರೆ), ಷಿನಾಲೋಡೋಹ್ (ಹಬ್ಬದಹಾಡು) ಪಿವೋನ್‍ಗು ಮುಂತಾದ ನೃತ್ಯಗಳು ನಾಗಾ ಜನರಲ್ಲಿವೆ.

	ಈ ನೃತ್ಯಗಳಲ್ಲಿ ಪಾದಚಲನೆ ಹೆಚ್ಚು ತೀವ್ರತರವೂ ಸಕ್ರಮವೂ ಆಗಿರುತ್ತದೆ. ತಲೆ ಮತ್ತು ಎದೆ ಕುಣಿಸುವಿಕೆ ಲಾಲಿತ್ಯ ಪೂರ್ಣವಾಗಿರುತ್ತವೆ. ರಾಸಲೀಲಾ ನೃತ್ಯವೊಂದನ್ನು ಬಿಟ್ಟರೆ ಉಳಿದ ನೃತ್ಯಗಳಲ್ಲಿ ಉಡುಗೆ ತೊಡುಗೆಗಳು ಫಿನಾಕ್ ಎಂಬ ಹೆಸರಿನ ಉದ್ದನೆಯ ಲಂಗ ಮತ್ತು ಬಿಗಿಯಾದ ಕುಪ್ಪಸವಾಗಿರುತ್ತವೆ. ತಲೆಯ ತೊಡುಗೆಗಳು ಮತ್ತು ಮಣಿಯಾಭರಣಗಳು ಇವರ ಲಾಕ್ಷಣಿಕ ವಸ್ತುಗಳೆನ್ನಬಹುದು. ಮಣಿಪುರಿಯ ಎಲ್ಲ ನೃತ್ಯಗಳ ಹಿನ್ನೆಲೆ ಸಂಗೀತದಲ್ಲಿ ಬಳಸುವ ವಾದ್ಯಗಳೆಂದರೆ ಪುಂಗ್ (ಮೃದಂಗ), ಕರ್ತಾಲ್ (ಜಲ್ಲರಿ) ಮತ್ತು ನಾಡವಾದ್ಯ ವಾದ ಪೆನಾ, ಅದರೆ ನಾಗಾ ನೃತ್ಯಗಳಲ್ಲಿ ಈವಾದ್ಯಗಳಿಗೆ ಬದಲಾಗಿ ಪ್ರಾಚೀನಕಾಲದ ನಗಾರಿ ಇಲ್ಲವೆ ಮದ್ದಳೆಯನ್ನು ಬಳಸಲಾಗುತ್ತದೆ. ಹಾಡುಗಾರಿಕೆ ಎಲ್ಲ ನೃತ್ಯಗಳ ಹಿನ್ನೆಲೆ ಸಂಗೀತವಾಗಿರುತ್ತದೆ.  													
(ಎಸ್.ಸಿ.ಪಿ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ